ಮುಕ್ಕೋಟಿ ದೇವತೆಗಳಾಳುತಿಹ ಲೋಕದಲಿ।
ದಿಕ್ಕುಗಾಣದೆ ಜೀವಿಯಲೆವುದಚ್ಚರಿಯೇಂ?॥
ಒಕ್ಕಟ್ಟನೊಡೆಯರೇ ಕಲಿಯದಿರೆ ನಮ್ಮ ಗತಿ-।
ಗಿಕ್ಕಟ್ಟು ತಪ್ಪುವುದೆ ? – ಮಂಕುತಿಮ್ಮ ॥
**
ಭಕ್ತಿ ನಂಬುಗೆ ಸುಲಭ; ಭಜನೆ ವಂದನೆ ಸುಲಭ ।
ತತ್ವಶೋಧನೆ ಕಷ್ಟ; ಮತಿಕಾರ್ಯ ಕಷ್ಟ ॥
ಸುತ್ತುವುದು ಗಿರಿಸುತ್ತ ಸುಳುವೆಂದು ಲೋಕಜನ ।
ಹತ್ತುವನು ತಾಪಸಿಯೋ – ಮಂಕುತಿಮ್ಮ ॥
**

ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ।
ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ ॥
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ।
ಜಸವು ಜನಜೀವನಕೆ – ಮಂಕುತಿಮ್ಮ ॥
**
ಅನುಭವದ ಪರಿ ನೂರ್ವರಿಗೆ ನೂರು ನೂರು ಪರಿ ।
ದಿನವೊಂದರೊಳೆ ಅದೊಬ್ಬಂಗೆ ನೂರು ಪರಿ ॥
ಎಣಿಪುದಾರನುಭವವನ್, ಆವ ಪ್ರಮಾಣದಲಿ ।
ಮಣಲ ಗೋಪುರವೊ ಅದು – ಮಂಕುತಿಮ್ಮ ॥
**

ಎನಗೆ ಸುಖವಿಲ್ಲವದರಿಂ ದೇವರಿರನೆನ್ನು- ।
ವನುಮಿತಿಯ ನೀಂ ಗೆಯ್ಕೆ, ಸುಖಿಯದೇನೆನುವಂ? ॥
ತನುಬಾಹ್ಯಕರಣದನುಭವಕಿಂತ ಸೂಕ್ಷ್ಮತರ- ।
ದನುಭವವ ನೀನರಸೋ – ಮಂಕುತಿಮ್ಮ ॥
**
ನರಕ ತಪ್ಪಿತು ಧರ್ಮಜಂಗೆ,ದಿಟ, ಆದೊಡೇಂ ।
ನರಕ ದರ್ಶನದುಃಖ ತಪ್ಪದಾಯಿತಲ? ॥
ದುರಿತತರುವಾರು ನೆಟ್ಟುದೊ, ನಿನಗುಮುಂಟು ಫಲ ।
ಚಿರಋಣದ ಲೆಕ್ಕವದು – ಮಂಕುತಿಮ್ಮ ॥
**

ದೊರೆಗೆ ನೀಂ ಬಿನ್ನಯಿಸೆ ನೂರೆಂಟು ಬಯಕೆಗಳ ।
ಸರಿ ತನಗೆ ತೋರ್ದೆನಿತನ್ ಅದರೊಳವನೀವಂ ॥
ಅರಿಕೆಯೆಲ್ಲವನಡಸದಿರೆ ದೊರೆಯೆ ಸುಳ್ಳಹನೆ ।
ಕರುಣೆ ನಿರ್ಬಂಧವೇಂ – ಮಂಕುತಿಮ್ಮ ॥
**
ಸಂಗೀತ ತಲೆದೂಗುವುದು, ಹೊಟ್ಟೆ ತುಂಬೀತೆ? ।
ತಂಗದಿರೆನೆಸಕ ಕಣ್ಗಮೃತ, ಕಣಜಕದೇಂ? ॥
ಅಂಗಡಿಯ ಮಾಡದಿರು ಸುಕೃತಪ್ರಸಕ್ತಿಯಲಿ ।
ಪೊಂಗುವಾತ್ಮವೇ ಲಾಭ – ಮಂಕುತಿಮ್ಮ || **

ಬಹುಜನಂ ಕೈಮುಗಿದ ತೀರ್ಥದೊಳ್ ಕ್ಷೇತ್ರದೊಳ್ ।
ಮಹಿಮೆಯಲ್ಲೇನೆಂದು ಸಂಶಯಿಸಬೇಡ ॥
ವಿಹಿತಗೈದವರಾರು ವಸತಿಯಂ ದೈವಕ್ಕೆ? ।
ಮಹಿಮೆ ಮನಸೋತೆಡೆಯೆ- ಮಂಕುತಿಮ್ಮ ॥
**
ಅಂಬುಧಿಯ ಮಡಕೆಯಲಿ, ಹೊಂಬಿಸಿಲ ಕಿಟಕಿಯಲಿ ।
ತುಂಬಿಕೊಳ್ಳುವ ಬಡವನೈಶ್ವರ್ಯದಂತೆ ॥
ಬಿಂಬದೊಳಗಮಿತ ಸತ್ವವ ಪಿಡಿದಿಡುವ ಭಕ್ತಿ- ॥
ಯಿಂಬು ಕಿಂಚಿನ್ಮತಿಗೆ – ಮಂಕುತಿಮ್ಮ ॥
**

ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ ।
ನಂಬಿಯುಂ ನಂಬದಿರುವಿಬ್ಬಂದಿ ನೀನು ॥
ಕಂಬದಿನೋ ಬಿಂಬದಿನೋ ಮೋಕ್ಷವವರಿಂಗಾಯ್ತು ।
ಸಿಂಬಳದಿ ನೊಣ ನೀನು – ಮಂಕುತಿಮ್ಮ ॥
**
ಕತ್ತಲೆಯೊಳೇನನೊ ಕಂಡು ಬೆದರಿದ ನಾಯಿ ।
ಎತ್ತಲೋ ಸಖನೋರ್ವನಿಹನೆಂದು ನಂಬಿ ॥
ಕತ್ತೆತ್ತಿ ಮೋಳಿಡುತ ಬೊಗಳಿ ಹಾರಾಡುವುದು ।
ಭಕ್ತಿಯಂತೆಯೆ ನಮದು ಮಂಕುತಿಮ್ಮ ॥
**

ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು ।
ಜಗಿವ ಮುಳ್ಳಿರಿತಗಳ ಸೈರಿಸೆ ಗುಲಾಬಿ ॥
ನಗುವುದೊಂದರೆನಿಮಿಷ; ನಗಲು ಬಾಳ್ಮುಗಿಯುವುದು ।
ಮುಗುಳು ದುಡಿತಕೆ ತಣಿಸು – ಮಂಕುತಿಮ್ಮ ॥
**
ಕಾರಿರುಳೊಳಾಗಸದಿ ತಾರೆ ನೂರಿದ್ದೇನು? ।
ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು ॥
ದೂರದಾ ದೈವವಂತಿರಲಿ, ಮಾನುಷಸಖನ ।
ಕೋರುವುದು ಬಡಜೀವ – ಮಂಕುತಿಮ್ಮ ॥
**

ಕುಸುಮಕೋಮಲಗಾತ್ರ ಶೂರ್ಪಣಖಿಗರಿದಾಯ್ತೆ? ।
ವಿಷದ ಪೂತನಿ ನಯನಪಕ್ಷ್ಮದೊಳಗಿರಳೆ ॥
ಮುಸಿನಗುವಿನೊಳಗಿರಲಶಕ್ಯವೆ ಪಿಶಾಚಿಗೆ?।
ಮೃಷೆಯೋ ಮೈಬೆಡಗೆಲ್ಲ – ಮಂಕುತಿಮ್ಮ ॥
**
ಮರಣಶಯ್ಯೆಯದೆಂದು ತಿಳಿದೊಡಂ ರೋಗಿಯನು ।
ಹರಣಮಿರುವನ್ನೆಗಂ ಪರಿಚರಿಸುವಂತೆ ॥
ಸ್ಥಿರವಲ್ಲವೀ ಲೋಕವಾದೊಡಮದುಳ್ಳನಕ ।
ಚರಿಸು ನೀನಾಳಾಗಿ – ಮಂಕುತಿಮ್ಮ **

ದೇಹವೆಂಬುದು ಕುದುರೆಯಾತ್ಮನದರಾರೋಹಿ ।
ವಾಹನವನುಪವಾಸವಿರಿಸೆ ನಡೆದೀತೆ? ॥
ರೋಹಿ ಜಾಗ್ರತೆದಪ್ಪೆ ಯಾತ್ರೆ ಸುಖ ಸಾಗೀತೆ? ॥
ಸ್ನೇಹವೆರಡಕುಮುಚಿತ – ಮಂಕುತಿಮ್ಮ **
ಹುರಿಯುರುಳೆ ಹಾವಲ್ಲವಾದೊಡಂ ಮಬ್ಬಿನಲಿ ।
ಹರಿದಾಡಿದಂತಾಗೆ ನೋಳ್ಪವಂ ಬೆದರಿ॥
ಸುರಿಸುವಾ ಬೆವರು ದಿಟ; ಜಗವುಮಂತುಟೆ ದಿಟವು ।
ಜರೆಯದಿರು ತೋರ್ಕೆಗಳ – ಮಂಕುತಿಮ್ಮ ॥
**

ಜನಕಜೆಯ ದರುಶನದಿನಾಯ್ತು ರಾವಣ ಚಪಲ ।
ಕನಕಮೃಗದರುಶನದೆ ಜಾನಕಿಯ ಚಪಲ ॥
ಜನವವನ ನಿಂದಿಪುದು, ಕನಿಕರಿಪುದಾಕೆಯಲಿ ।
ಮನದ ಬಗೆಯರಿಯದದು – ಮಂಕುತಿಮ್ಮ ॥
**
ಉದರದೈವಕೆ ಜಗದೊಳೆದುರು ದೈವವದೆಲ್ಲಿ?।
ಮೊದಲದರ ಪೂಜೆ; ಮಿಕ್ಕೆಲ್ಲವದರಿಂದ ॥
ಮದಿಸುವುದದಾದರಿಸೆ ಕುದಿವುದು ನಿರಾಕರಿಸೆ ।
ಹದದಳಿರಿಸುವುದೆಂತೊ – ಮಂಕುತಿಮ್ಮ॥
**

ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು।
ಬೇಕುನುತ ಬೊಬ್ಬಿಡುತಲಿಹ ಘಟವನಿದನು ॥
ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ ।
ಸಾಕೆನಿಪುದೆಂದಿಗೆಲೊ – ಮಂಕುತಿಮ್ಮ ॥
**
ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ ? ।
ವಿಹಿತವಾಗಿಹುದುದದರ ಗತಿ ಸೃಷ್ಟಿ ವಿಧಿಯಿಂ ॥
ಸಹಿದಲ್ಲದೆ ಮುಗಿಯದಾವ ದಶೆ ಬಂದೊಡಂ ।
ಸಹನೆ ವಜ್ರದ ಕವಚ – ಮಂಕುತಿಮ್ಮ ॥
**

ಅದು ಒಳಿತು ಇದು ಕೆಟ್ಟದೆಂಬ ಹಠ ನಿನಗೇಕೆ?।
ಹೊದಿಸಿಹುದು ದೈವವೆಲ್ಲಕಮೊಂದು ತೆರೆಯ॥
ಸೊದೆಯ ಸೌರಭ ನಂಜುಬಟ್ಟಲಲಿ ತೋರೀತು ।
ವಿಧಿಯ ಬಗೆಯೆಂತಿಹುದೊ – ಮಂಕುತಿಮ್ಮ ॥
**
ದಾತನೆಣ್ಣೆಯಗಾಣದೆಳ್ಳುಕಾಳೆಲೆ ನೀನು ।
ಆತನೆಲ್ಲರನರೆವನ್; ಆರನುಂ ಬಿಡನು॥
ಆತುರಂಗೊಳದೆ ವಿಸ್ಮ್ರುತಿಬಡದುಪೇಕ್ಷಿಸದೆ ॥
ಘಾತಿಸುವನೆಲ್ಲರನು – ಮಂಕುತಿಮ್ಮ ॥
**

ಮಿತ ನಿನ್ನ ಗುಣ ಶಕ್ತಿ, ಮಿತ ನಿನ್ನ ಕರ್ತವ್ಯ ।
ಮಿತಿ ಅತಿಗಳಂತರವ ಕಾಣುವುದೇ ಕಡಿದು ॥
ಹಿತವೆನಿಸದನಿತೆಸಗು ದೈವಕುಳಿದುದನು ಬಿಡು ।
ಕೃತಿಯಿರಲಿ ದೈವಕಂ – ಮಂಕುತಿಮ್ಮ ॥
**
ಹುದುಗಿಹುದದೆಲ್ಲಿ ಪರಮಾತ್ಮನೀ ತನುವಿನಲಿ?।
ಹೃದಯದೊಳೋ ಮೆದುಳಿನೊಳೋ ಹುಬ್ಬಿನಿರುಕಿನೊಳೋ ?॥
ಇದನೆನಿತೋ ತರ್ಕಿಸಿಹರ್; ಎಣ್ಣಿಕೆಯನುಕೇಳು ।
ಉದರವಾತ್ಮನಿವಾಸ – ಮಂಕುತಿಮ್ಮ ॥
**

ಓರ್ವ ನಾನೆಂದು ನೀನೆಂತು ತಿಳಿಯುವೆ ಜಗದಿ?।
ನೂರ್ವರಣಗಿಹರು ನಿನ್ನಾತ್ಮ ಕೋಶದಲಿ ॥
ಪೂರ್ವಿಕರು, ಜತೆಯವರು,ಬಂಧುಸಖಶತ್ರುಗಳು।
ಸರ್ವರಿಂ ನಿನ್ನ ಗುಣ – ಮಂಕುತಿಮ್ಮ ॥
**
ಒಟ್ಟಿನಲ್ಲಿ ತತ್ವವಿದು; ವಿಕಟರಸಿಕನೋ ಧಾತ।
ತೊಟ್ಟಿಲನು ತೂಗುವನು; ಮಗುವ ಜಿಗುಟುವನು॥
ಸಿಟ್ಟನ್ ಒಡಹುಟ್ಟುಗಳೊಳಾಗಿಪನು,ಸೋಲಿಪನು।
ತುತ್ತು ವಿಕಟಿಗೆ ನಾವು – ಮಂಕುತಿಮ್ಮ॥
**

ಸರಕಾರ ಹರಿಗೋಲು, ತೆರೆಸುಳಿಗಳತ್ತಿತ್ತ।
ಸುರೆ ಕುಡಿದವರು ಕೆಲರು ಹುಟ್ಟು ಹಾಕುವರು॥
ಬಿರುಗಾಳಿ ಬೀಸುವುದು, ಜನವೆದ್ದು ಕುಣಿಯುವುದು।
ಉರುಳದಿಹುದಚ್ಚರಿಯೊ – ಮಂಕುತಿಮ್ಮ॥
**
ಹೊತ್ತು ಕಣಕಣದಿ ಮಣ್ಣನು ಗೆದ್ದಲಿರುವೆಗಳು।
ಮೆತ್ತುತೆಡೆಬಿಡದೆ ದುಡಿದಾಗಿಸಿದ ಗೂಡು॥
ಹುತ್ತವಾಗುವುದು ವಿಶಸರ್ಪಕ್ಕೆ; ಮಾನವನ।
ಯತ್ನಗಳ ಕಥೆಯಷ್ಟೆ – ಮಂಕುತಿಮ್ಮ॥
**

ತಿದ್ದಿಕೊಳೊ ನಿನ್ನ ನೀಂ; ಜಗವ ತಿದ್ದುವುದಿರಲಿ।
ತಿದ್ದಿಕೆಗಮೊಂದು ಮಿತಿಯುಂಟು ಮರೆಯದಿರು॥
ಉದ್ದ ನೀಂ ಬೆರಳನಿತು ಬೆಳೆದೇಯೆ ಸಾಮಿಂದ ।
ಸ್ಪರ್ಧಿಯೇ ತ್ರಿವಿಕ್ರಮಗೆ? – ಮಂಕುತಿಮ್ಮ॥
***
ರಾಮನಿರ್ದಂದು ರಾವಣನೊಬ್ಬನಿರ್ದನಲ।
ಭೀಮನಿರ್ದಂದು ದುಶ್ಶಾಸನನದೊರ್ವನ್॥
ಈ ಮಹಿಯೊಳನ್ಯಾಯಕಾರಿಯಿಲ್ಲದುದೆಂದು ?।
ರಾಮಭಟನಾಗು ನೀಂ – ಮಂಕುತಿಮ್ಮ॥