ಕನ್ನಡ ಗೀತಾಚಾರ್ಯ ಡಿ ವಿ ಗುಂಡಪ್ಪನವರ ಕಗ್ಗಗಳು ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಒಂದಕ್ಕಿಂತ ಒಂದು ಕಗ್ಗಗಳು ಬಹಳ ಬೆಲೆ ಬಾಳುವಂತವು, ಅರ್ಥವತ್ತಗಿರುವಂತವು. ಕನ್ನಡ ಭಗವದ್ಗೀತಾ ಅಂತಲೇ ಕರೆಯಿಸಿಕೊಳ್ಳೊ ೯೪೫ ಪದ್ಯಗಳ ಬೃಹತ್ ಸಂಗ್ರಹ ಇದು. ಇಲ್ಲಿನ ಪ್ರತಿಯೊಂದು ಕಗ್ಗಗಳು ಅಕ್ಷರ ಅಕ್ಷರ ಲಕ್ಷ ವರಹ ಬೆಲೆ ಬಾಳುವಂತವು.
ಕುವೆಂಪು ಅವರೇ ಹೇಳಿದ ಹಾಗೆ.. ಹಸ್ತಕ್ಕೆ ಬರೆ ನಕ್ಕೆ; ಓದುತ್ತ ಓದುತ್ತ । ಮಸ್ತಕಕ್ಕಿಟ್ಟು ಗಂಭೀರವಾದೆ ॥ ವಿಸ್ತರದ ದರ್ಶನಕೆ ತುತ್ತತುದಿಯಲಿ ನಿನ್ನ । ಪುಸ್ತಕಕೆ ಕೈಮುಗಿದೆ – ಮಂಕುತಿಮ್ಮ ॥
ನನ್ನ ಅಚ್ಚು ಮೆಚ್ಚಿನ ಕೆಲವೊಂದು ಕಗ್ಗಗಳ ಸಂಗ್ರಹ ಇದು…. ** ಮನೆಯ ಮಾಳಿಗೆಗಲ್ಲ, ಮುಡಿಯ ಕೊಪ್ಪಿಗೆಗಲ್ಲ । ಇನಿವಣ್ಣು ತನಿಯ ಕಾಳೆಂಬುದೇನಿಲ್ಲ ॥ ಬಣಗು ಕುರಿಚಲು ಗಿಡದ ಬಾಳೇನು? ನೀನಂತು । ಒಣಗಿದೊಡೆ ಸವುದೆ ಸರಿ – ಮಂಕುತಿಮ್ಮ ॥ ** ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ । ನಗುವ ಕೇಳುತ ನಗುವುದತಿಶಯದ ಧರ್ಮ ॥ ನಗುವ ನಗಿಸುವ ನಗಿಸಿ ನಗುತ ಬಾಳುವ ವರವ । ಮಿಗೆ ನೀನು ಬೇಡಿಕೊಳೋ ಮಂಕುತಿಮ್ಮ ॥ ** ಸಾಮಾನ್ಯರೊಳ್ ಪುಟ್ಟಿ, ಸಾಮಾನ್ಯರೊಳ್ ಬೆಳೆದು । ಭೂಮಿಪತಿಪಟ್ಟವನು ಜನ ತನಗೆ ಕಟ್ಟಲ್ ॥ ಸಾಮರ್ಥ್ಯದಿಂದವರನಾಳ್ದ ಲಿಂಕನನಂತೆ । ಸ್ವಾಮಿ ಲೋಕಕೆ ಯೋಗಿ – ಮಂಕುತಿಮ್ಮ ॥ ** ಮಲಗಿದೋದುಗನ ಕೈಹೊತ್ತಿಗೆಯು ನಿದ್ದೆಯಲಿ । ಕಳಚಿ ಬೀಳ್ವುದು; ಪಕ್ವಫಲವಂತು ತರುವಿಂ ॥ ಇಳೆಯ ಸಂಬಂಧಗಳು ಸಂಕಲ್ಪನಿಯಮಗಳು । ಸಡಿಲುವುವು ಬಾಳ್ ಮಾಗೆ – ಮಂಕುತಿಮ್ಮ ॥ ** ನಾನು ನಾನೇ ನಾನೆನುತ್ತೆ ಕಿರಿಕೊಡದ ನೀರ್ । ಗಾನಗೆಯ್ವುದು ಹೆಮ್ಮೆಯಿಂ ಕಡಲ ಮರೆತು ॥ ನೂನದಿಂದೆಲ್ಲವನುವಬ್ಧಿಯೊಳಗದನಿರಿಸೆ । ಮೌನವದು ಮಣ್ಕರಗಿ – ಮಂಕುತಿಮ್ಮ ॥ ** ನಗುನಗುವ ಕಣ್ಗಳಿಗೆ ಹೊಗೆಯನೂದಲುಬೇಡ । ಜಗವ ಸುಡುಗಾಡೆನುವ ಕಟುತಪಸು ಬೇಡ ॥ ಮಗುವು ತಾಯ್ತಂದೆಕಣ್ಮುಂದೆ ನಡೆವಂತೆ ನಡೆ । ಮಿಗೆಚಿಂತೆ ತಲೆಹರಟೆ – ಮಂಕುತಿಮ್ಮ ॥ ** ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ । ತಳದ ಕಸ ತೇಲುತ್ತ ಬಗ್ಗಡವದಹುದು ॥ ಕಲಕದದ್ದದೆ ಕೊಂಚ ಬಿಟ್ಟಿದ್ದೊಡದು ಮರಳಿ । ತಿಳಿಯಹುದು ಶಾಂತಿಯಲಿ ಮಂಕುತಿಮ್ಮ ॥ ** ಕೋಡುಗಲ್ಲನು ಹತ್ತಿ ದೂರವನು ನೋಳ್ಪಂಗೆ । ಗೋಡೆಗೊತ್ತುಗಳೇನು? ಮೇಡು ಕುಳಿಯೇನು? ॥ ನೋಡು ನೀನುನ್ನತದಿ ನಿಂತು ಜನಜೀವಿತವ । ಮಾಡುದಾರದ ಮನವ – ಮಂಕುತಿಮ್ಮ ॥ ** ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು । ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ॥ ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ । ಎಲ್ಲರೊಳಗೊಂದಾಗು ಮಂಕುತಿಮ್ಮ ॥ ** ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ? । ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ ॥ ವೇಳೆ ಗಡು ಮರೆತಾತುರದಿನ್ ಅಡುಗೆ ಪಕ್ಕಹುದೆ । ತಾಳುಮೆಯೆ ಪರಿಪಾಕ – ಮಂಕುತಿಮ್ಮ ॥ ** ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು । ಗುರುತಿಸೊಳಿತಿರುವುದನು ಕೇಡುಗಳ ನಡುವೆ ॥ ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು । ಹರುಷಕದೆ ದಾರಿಯೆಲೊ – ಮಂಕುತಿಮ್ಮ ॥ ** ಅನ್ನವುಣುವಂದು ಕೇಳ್; ಅದನು ಬೇಯಿಸಿದ ನೀರ್ । ನಿನ್ನ ದುಡಿತದ ಬೆಮರೊ, ಪರರ ಕಣ್ಣೀರೋ ॥ ತಿನ್ನು ನೀಂ ಜಗಕೆ ತಿನಲಿತ್ತಿನಿತ; ಮಿಕ್ಕೂಟ । ಜೀರ್ಣಿಸದ ಋಣಶೇಷ – ಮಂಕುತಿಮ್ಮ ॥ ** ಅವರೆಷ್ಟು ಧನವಂತರ್, ಇವರೆಷ್ಟು ಬಲವಂತರ್ । ಅವರೆಷ್ಟು ಯಶವಂತರ್ ಎನುವ ಕರುಬಿನಲಿ ॥ ಭವಿಕ ನಿನಗೆಷ್ಟಿಹುದೊ ಮರೆತು ನೀಂ ಕೊರಗುವುದು । ಶಿವನಿಗೆ ಕೃತಜ್ಞತೆಯೆ? – ಮಂಕುತಿಮ್ಮ॥ ** ಓಲೆಗಾರನಿಗೇಕೆ ಬರೆದ ಸುದ್ಧಿಯ ಚಿಂತೆ? । ಓಲೆಗಳನವರವರಿಗೈದಿಸಿದರೆ ಸಾಕು ॥ ಸಾಲಗಳೊ, ಶೂಲಗಳೊ, ನೋವುಗಳೊ ನಗುವುಗಳೊ। ಕಾಲೋಟವವನೂಟ – ಮಂಕುತಿಮ್ಮ॥ ** ತನ್ನ ಶಿಲುಬೆಯ ತಾನೇ ಹೊತ್ತನಲ ಗುರು ಯೇಸು?। ನಿನ್ನ ಕರ್ಮದ ಹೊರೆಯ ಬಿಡದೆ ನೀನೆ ಹೊರು ॥ ಖಿನ್ನನಾಗದೆ ತುಟಿಯ ಬಿಗಿದು ಶವಭಾರವನು । ಬೆನ್ನಿನಲಿ ಹೊತ್ತು ನಡೆ – ಮಂಕುತಿಮ್ಮ ॥ ** ಮೃತನ ಸಂಸಾರಕಥೆ ಶವವಾಹಕರಿಗೇಕೆ । ಸತಿಯು ಗೋಳಿಡಲಿ ಸಾಲಿಗನು ಬೊಬ್ಬಿಡಲಿ ॥ ಜಿತಮನದಿ ಚಿತಿಗಟ್ಟಿ ಕೊಂಡೊಯ್ಯುತಿಹರವರು । ಧೃತಿಯ ತಳೆ ನೀನಂತು ಮಂಕುತಿಮ್ಮ ॥ ** ಅರಸಡವಿಗೈದಿದೊಡಂ, ಅವನಿತ್ತ ಪಾದುಕೆಗ-। ಳೊರೆಯದೊಡಮೇನನಂ, ತಾಂ ವರದಿಯೊರೆದು ॥ ದೊರೆತನದ ಭಾರವನು ಹೊತ್ತು ದೊರೆಯಾಗದಾ । ಭರತನವೊಲಿರು ನೀನು – ಮಂಕುತಿಮ್ಮ ॥ ** ಎಡವದೆಯೆ, ಮೈಗಾಯವಡೆಯೆದೆಯೆ ಮಗುವಾರು । ನಡೆಯ ಕಲಿತವನು? ಮತಿನೀತಿಗತಿಯಂತು ॥ ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು ಮೈ-। ದಡವಿಕೊಳುವವರೆಲ್ಲ – ಮಂಕುತಿಮ್ಮ ॥ ** ಶರಧಿಯನೀಜುವನು, ಸಮರದಲಿ ಕಾದುವನು । ಗುರಿಯೊಂದನುಳಿದು ಪೆರತೊಂದ ನೋಡುವನೆ? ॥ ಮರೆಯುವನು ತಾನೆಂಬುದನೆ ಮಹಾವೇಶದಲಿ । ನಿರಹಂತೆಯದು ಮೋಕ್ಷ – ಮಂಕುತಿಮ್ಮ ॥ ** ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ । ಧರ್ಮಸಂಕಟಗಳಲಿ, ಜೀವಸಮರದಲಿ ॥ ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ । ನಿರ್ಮಿತ್ರನಿರಲು ಕಲಿ – ಮಂಕುತಿಮ್ಮ ॥ ** ಮುಂದೇನೋ, ಮತ್ತೇನೋ, ಇಂದಿಗಾ ಮಾತೇಕೆ? । ಸಂದರ್ಭ ಬರಲಿ, ಬಂದಾಗಳಾ ಚಿಂತೆ ॥ ಹೊಂದಿಸುವನಾರೊ,ನಿನ್ನಾಳಲ್ಲ, ಬೇರಿಹನು । ಇಂದಿಗಿಂದಿನ ಬದುಕು – ಮಂಕುತಿಮ್ಮ ॥ ** ಶಿಶುಗಳವಲಕ್ಕಿಬೆಲ್ಲದ ಸಂಭ್ರಮವ ನೋಡಿ । ಹಸಿವನೊಂದುವನೆ ಹಿರಿಯನು? ನಲಿಯದಿಹನೆ?॥ ವಿಷಯಸಂಸಕ್ತಲೋಕವನ್ ಅನಾಸಕ್ತಿಯಿಂ-। ದೊಸೆದುನೋಳ್ಪನು ಜಾಣ – ಮಂಕುತಿಮ್ಮ ॥ ** ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ । ಫಲ ಮಾಗುವಂದು ತುತ್ತೂರಿ ದನಿಯಿಲ್ಲ ॥ ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ । ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ ॥ ** ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು । ಮಗುವು ಪೆತ್ತರ್ಗೆ ನೀಂ , ಲೋಕಕೆ ಸ್ಪರ್ಧಿ ॥ ಹೆಗಲಹೊರೆ ಹುಟ್ಟಿದರ್ಗೆಲ್ಲಮಿರುತಿರೆ, ನಿನ್ನ । ರಗಳೆಗಾರಿಗೆ ಬಿಡುವೋ ? – ಮಂಕುತಿಮ್ಮ ॥ ** ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ । ಕೊರತೆಯೊಂದನು ನೀನು ನೆನೆನೆನೆದು ಕೆರಳಿ ॥ ಧರೆಯೆಲ್ಲವನು ಶಪಿಸಿ ಮನದಿ ನರಕವ ನಿಲಿಸಿ । ನರಳುವುದು ಬದುಕೇನೊ ಮಂಕುತಿಮ್ಮ ॥ ** ಹಾಲ ಕಾಯಿಸಿ ಹೆಪ್ಪನಿಕ್ಕಿ ಕಡೆದೊಡೆ, ಮೊದಲು । ಮೇಲೆ ಕಾಣದ ಬೆಣ್ಣೆ ತೇಲಿ ಬರುವಂತೆ ॥ ಬಾಳನೀ ಜಗದ ಮಂತುವು ಕಡೆಯಲೇಳುವುದು । ಅಳದಿಂದಾತ್ಮಮತಿ – ಮಂಕುತಿಮ್ಮ ॥ ** ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು । ದೊರೆತುದ ಹಸಾದವೆಂದುಣ್ಣು ಗೊಣಗಿಡದೆ ॥ ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ । ಹೊರಡು ಕರೆ ಬರಲ್ ಅಳದೆ – ಮಂಕುತಿಮ್ಮ ॥ ** ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ । ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ॥ ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು । ಪದ ಕುಸಿಯೆ ನೆಲವಿಹುದು – ಮಂಕುತಿಮ್ಮ ॥ ** ನಿನಗಿರದ ಕಣ್ ಬಾಯಿ ವಾಲ್ಮೀಕಿಗೆಂತಾಯ್ತು? । ಮುನಿಕವಿತೆಗೆಂತು ನಿನ್ನೆದೆಯೊಳೆಡೆಯಾಯ್ತು? ॥ ಘನಮಹಿಮನೊಳ್ ಜ್ವಲಿಸುತಿತರರೊಳು ನಿದ್ರಿಸುತೆ । ಅನಲನೆಲ್ಲರೊಳಿಹನು – ಮಂಕುತಿಮ್ಮ ॥ ** ಕ್ಷಿತಿರುಹಕೆ ಸುಮಫಲಮುಹೂರ್ತ ನಿಶ್ಚಿತವೇನು? । ಮತಿಮನಂಗಳ ಕೃಷಿತಪಃಫಲವುಮಂತು ॥ ಸತತ ಕೃಷಿ, ಬೀಜಗುಣ,ಕಾಲವರ್ಷಗಳೊದವೆ । ಪ್ರತಿಭೆ ವಿಕಸಿತವಹುದೊ -ಮಂಕುತಿಮ್ಮ ॥ ** ಕಟ್ಟಡದ ಪರಿಯನಿಟ್ಟಿಗೆಯಂತು ಕಂಡೀತು? । ಗಟ್ಟಿ ನಿಲದದು ಬೀಳೆ ಗೋಡೆ ಬಿರಿಯುವುದು ॥ ಸೃಷ್ಟಿಕೋಟೆಯಲಿ ನೀನೊಂದಿಟಿಕೆ; ಸೊಟ್ಟಾಗೆ । ಪೆಟ್ಟು ತಿನ್ನುವೆ ಜೋಕೆ – ಮಂಕುತಿಮ್ಮ ॥ **
ಕಗ್ಗಗಳ ಬಗ್ಗೆ ಇನ್ನಷ್ಟು ಆಸಕ್ತಿ ಇರುವವರಿಗೆ: ಕಗ್ಗಗಳ ಉಪಖ್ಯಾನ – ಶತಾವಧಾನಿ ಗಣೇಶ್ ಕಗ್ಗ ರಸಧಾರೆ ಕಗ್ಗಕ್ಕೊಂದು ಕೈಪಿಡಿ